ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಗಾರ ಯಶಸ್ವಿಯಾಗಿ ಆರಂಭ
ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಗಣಕ ವಿಜ್ಞಾನ ವಿಭಾಗದ ವತಿಯಿಂದ PM-UShA MERU ಯೋಜನೆಯ (Soft Components–22 & 25) ಅಡಿಯಲ್ಲಿ, ಯುನಿವರ್ಸಿಟಿ ಆಫ್ ಸಾಲ್ಫರ್ಡ್, ಮ್ಯಾಂಚೆಸ್ಟರ್ (ಯು.ಕೆ.) ಸಹಯೋಗದಲ್ಲಿ "National Workshop on Intelligent Systems & Machine Learning for Emerging Trends in Scientific Research (NWISML-2026)" ಎಂಬ ಎರಡು ದಿನಗಳ ರಾಷ್ಟ್ರೀಯ ಕಾರ್ಯಗಾರವನ್ನು ದಿನಾಂಕ 05 ಹಾಗೂ 06 ಆಗಸ್ಟ್ 2026 ರಂದು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ, ಹುಬ್ಬಳ್ಳಿಯ ಕುಲಸಚಿವರಾದ ಪ್ರೊ. ಬಸವರಾಜ ಅನಾಮಿ ಅವರು ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ ಕ್ಷೇತ್ರಗಳಲ್ಲಿ ಸಂಶೋಧನೆಗೆ ಅಪಾರ ಅವಕಾಶಗಳಿದ್ದು, ಇಂತಹ ಕಾರ್ಯಗಾರಗಳು ಯುವ ಸಂಶೋಧಕರಲ್ಲಿ ಹೊಸ ಚಿಂತನೆ ಮತ್ತು ಸಂಶೋಧನಾ ಮನೋಭಾವವನ್ನು ಬೆಳೆಸಲಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಗಾರದಲ್ಲಿ ಅಂತರರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಶಿವಕುಮಾರ್ ಪಿ. (University of Salford, Manchester, UK) ಅವರು ಭಾಗವಹಿಸಿ, ಇತ್ತೀಚಿನ ಸಂಶೋಧನಾ ಪ್ರವೃತ್ತಿಗಳು, ಕೃತಕ ಬುದ್ಧಿಮತ್ತೆಯ ಬೆಳವಣಿಗೆಗಳು ಹಾಗೂ ಜಾಗತಿಕ ಸಂಶೋಧನಾ ಸಹಯೋಗದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಅಂತರರಾಷ್ಟ್ರೀಯ ಸಹಯೋಗದ ಮೂಲಕ ಗುಣಮಟ್ಟದ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧಯಕ್ಷತೆಯನ್ನು ವಹಿಸಿದ್ದ ಮಾನ್ಯ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ್ ಅವರು ಮಾತನಾಡಿ, PM-USHA MERU ಯೋಜನೆಯಡಿ ಆಯೋಜಿಸಲಾಗುತ್ತಿರುವ ಈ ರಾಷ್ಟ್ರೀಯ ಕಾರ್ಯಗಾರವು ವಿಶ್ವವಿದ್ಯಾಲಯದ ಸಂಶೋಧನಾ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ.
ಪ್ರೊ. ಶಿವಾನಂದ ಗೋರನಾಳೆ, ಗಣಕ ವಿಜ್ಞಾನ ವಿಭಾಗದ ಅಧ್ಯಕ್ಷರು ಮಾತನಾಡಿ, ಈ ಕಾರ್ಯಾಗಾರವು ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಹೊಸ ಬೆಳವಣಿಗೆಗಳ ಕುರಿತು ಅರಿವು ಮೂಡಿಸುವ ಉತ್ತಮ ವೇದಿಕೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾನ್ಯ ಕುಲಸಚಿವರಾದ ಶ್ರೀ ಸಂತೋಷ ಕಾಮಗೌಡ ಕೆ.ಎ.ಎಸ್. ಕಾರ್ಯಾಗಾರದ ಎರಡನೇ ದಿನವಾದ 06 ಆಗಸ್ಟ್ 2026 ರಂದು ಮತ್ತಷ್ಟು ತಾಂತ್ರಿಕ ಅಧಿವೇಶನಗಳು ಹಾಗೂ ಸಂಶೋಧನಾ ಚರ್ಚೆಗಳು ನಡೆಯಲಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಪ್ರೊ. ಡಿ. ಎನ್. ಪಾಟೀಲ್, ಕುಲಸಚಿವರು (ಮೌಲ್ಯಮಾಪನ), ಶ್ರೀಮತಿ ಸಪ್ನ ಎಂ. ಎ., ಹಣಕಾಸು ಅಧಿಕಾರಿಗಳು, ಪ್ರೊ. ವಿ. ಬಿ. ಅವಟಿ, ಡೀನರು, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ, ಪ್ರೊ. ಸಿ. ಎನ್. ಮನಗೂಳಿ, ನಿರ್ದೇಶಕರು, IQAC, ರಾಚವಿ, ಬೆಳಗಾವಿ, ಡಾ. ನಂದಿನಿ ದೇವರಮನಿ, ಸಂಯೋಜಕರು, PM-USHA (MERU), ಪ್ರೊ. ಪರಶುರಾಮ ಬನ್ನಿಗಿಡದ, ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ ಹಾಗೂ ಡಾ. ಮಲ್ಲಮ್ಮ ರೆಡ್ಡಿ, ಸಹಾಯಕ ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ ಉಪಸ್ಥಿತರಿದ್ದರು.
ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (KRCUB) ಗ್ರೀನ್ ಮೆಂಟರ್ಸ್ ಸಂಸ್ಥೆಯು ನಡೆಸಿದರಾಷ್ಟ್ರೀಯ ಹಸಿರು ವಿಶ್ವವಿದ್ಯಾಲಯ ಶ್ರೇಯಾಂಕ (National Green University Ranking – NGUR) 2026ರಲ್ಲಿ ಭಾಗವಹಿಸಿ, 100 ಅಂಕಗಳಲ್ಲಿ90.7 ಅಂಕಗಳನ್ನುಗಳಿಸುವ ಮೂಲಕಅಖಿಲ ಭಾರತ ಮಟ್ಟದಲ್ಲಿ 26ನೇ ಸ್ಥಾನವನ್ನುಪಡೆದು ಗಮನಾರ್ಹ ಸಾಧನೆ ಮಾಡಿದೆ. ಈ ಮಹತ್ವದ ಸಾಧನೆಯನ್ನು ಸಂಭ್ರಮಿಸುವ ಸಲುವಾಗಿ, ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC)ಸಹಯೋಗದಲ್ಲಿಎನ್‌ಐಆರ್‌ಎಫ್/ಎನ್‌ಜಿಯುಆರ್ ಸಮಿತಿಯು 2026ರಜುಲೈ 29ರಂದು ಮಧ್ಯಾಹ್ನ 12:00 ಗಂಟೆಗೆಕುವೆಂಪು ಸಭಾಂಗಣದಲ್ಲಿಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿತು.
ಕಾರ್ಯಕ್ರಮವು ಐಕ್ಯೂಎಸಿ ನಿರ್ದೇಶಕರಾದ ಪ್ರೊ. ಆರ್. ಎನ್. ಮನಗೂಳಿ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಅವರು ಆಗಮಿಸಿದ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ, ರಾಷ್ಟ್ರೀಯ ಹಸಿರು ವಿಶ್ವವಿದ್ಯಾಲಯ ಶ್ರೇಯಾಂಕ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾಲಯವು ಭಾಗವಹಿಸಿದ ಆರಂಭಿಕ ಹಂತದಿಂದ ಶ್ರೇಯಾಂಕ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸುವವರೆಗಿನ ಪಯಣವನ್ನು ವಿವರಿಸಿದರು. ಈ ಪ್ರಕ್ರಿಯೆಯಲ್ಲಿ ಎದುರಾದ ವಿವಿಧ ಸವಾಲುಗಳನ್ನು ಪ್ರಸ್ತಾಪಿಸಿದ ಅವರು, ವಿಶ್ವವಿದ್ಯಾಲಯದ ಆಡಳಿತ ವರ್ಗವು ನೀಡಿದ ಸಂಪೂರ್ಣ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಅಲ್ಲದೆ, ಶ್ರೇಯಾಂಕ ಪ್ರಕ್ರಿಯೆಯುದ್ದಕ್ಕೂ ಅಮೂಲ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಿದ ಧರ್ತಿ ಜಿಯೋ ಇನ್‌ಸೈಟ್ಸ್ ಸಂಸ್ಥೆಯ ಶ್ರೀ ಸಾಗರ್ ವಾಘಮರೆ ಹಾಗೂ ಅವರ ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಸಂತೋಷ ಕಾಮಗೌಡ, ಕೆ.ಎ.ಎಸ್. ಅವರು ಈ ಮಹತ್ವದ ಸಾಧನೆಗೆ ಶ್ರಮಿಸಿದ ಎಲ್ಲಾ ಅಧ್ಯಾಪಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು. ವಿಶ್ವವಿದ್ಯಾಲಯದ ಸಮಗ್ರ ಸಮುದಾಯದ ಒಗ್ಗಟ್ಟಿನ ಪ್ರಯತ್ನವನ್ನು ಅವರು ಶ್ಲಾಘಿಸಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯು ಇದೇ ರೀತಿಯ ಸಮರ್ಪಣೆ ಮತ್ತು ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸಿದರು. ಇದೇ ರೀತಿಯ ನಿರಂತರ ಪ್ರಯತ್ನದಿಂದ ವಿಶ್ವವಿದ್ಯಾಲಯವು ಮುಂಬರುವ ರಾಷ್ಟ್ರೀಯ ಶ್ರೇಯಾಂಕ ವ್ಯವಸ್ಥೆಗಳಲ್ಲಿ ಇನ್ನಷ್ಟು ಉನ್ನತ ಸ್ಥಾನಗಳನ್ನು ಗಳಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಅವರು ವಿಶ್ವವಿದ್ಯಾಲಯದ ಈ ಅತ್ಯುತ್ತಮ ಸಾಧನೆಗೆ ಸಮಸ್ತ ವಿಶ್ವವಿದ್ಯಾಲಯ ಕುಟುಂಬವನ್ನು ಅಭಿನಂದಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಇಂತಹ ಸಾಧನೆಗಳು ಬೋಧಕ, ಬೋಧಕೇತರ ಹಾಗೂ ಆಡಳಿತ ಸಿಬ್ಬಂದಿಯ ಪರಸ್ಪರ ಸಹಕಾರ ಮತ್ತು ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯವಾಗುತ್ತವೆ ಎಂದು ತಿಳಿಸಿದರು. ಇದೇ ರೀತಿಯ ತಂಡದ ಮನೋಭಾವ, ಸಮರ್ಪಣೆ ಮತ್ತು ಬದ್ಧತೆಯನ್ನು ಮುಂದುವರಿಸಿಕೊಂಡು, ಮುಂಬರುವ NAAC, NIRF ಹಾಗೂ ಇತರ ರಾಷ್ಟ್ರೀಯ ಶ್ರೇಯಾಂಕ ಮತ್ತು ಮಾನ್ಯತಾ ಚೌಕಟ್ಟುಗಳಲ್ಲಿ ವಿಶ್ವವಿದ್ಯಾಲಯವು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಗಣಿತಶಾಸ್ತ್ರ ವಿಭಾಗದ ಡಾ. ಮಹೇಶಕುಮಾರ ಎನ್. ಅವರು ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಡಿ. ಎನ್. ಪಾಟೀಲ, ವಿವಿಧ ನಿಖಾಯಗಳ ಡೀನರು, ಪ್ರಾಧ್ಯಾಪಕರು, ಆಡಳಿತ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸಹಿ/-
ಕುಲಸಚಿವರು