Prof. S.B. Akash
ನಿರ್ದೇಶಕರು

ಪ್ರಸಾರಾಂಗದ ಕುರಿತು
ಜ್ಞಾನ ಸೃಷ್ಟಿಯಂತೆಯೇ ಜ್ಞಾನ ಪ್ರಸರಣವು ಸಹ ವಿಶ್ವವಿದ್ಯಾಲಯಗಳ ಪ್ರಮುಖ ಜವಾಬ್ದಾರಿಯಾಗಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಈ ಗುರುತರ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಪ್ರಸಾರಂಗವು ಈಗಾಗಲೇ ಅನೇಕ ಸಾಧನೆಗಳ ಮೂಲಕ ನಾಡಿನ ಬೌದ್ಧಿಕ ಜಗತ್ತಿನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವವಿದ್ಯಾಲಯವು ತನ್ನ ದಶಮಾನೋತ್ಸವದ ಸಂಭ್ರಮದಲ್ಲಿರುವ ಈ ಅಪೂರ್ವ ಸಂದರ್ಭದಲ್ಲಿ ಅನೇಕ ಸೃಜನಶೀಲ ಯೋಜನೆಗಳನ್ನು ರೂಪಿಸಿಕೊಂಡಿರುವ ಪ್ರಸಾರಂಗವು ಹೊಸ ದಿಕ್ಕು ಹಾಗೂ ಗತಿಯಲ್ಲಿ ಮುನ್ನಡೆದಿದೆ.

ವಿದ್ಯಾರ್ಥಿಗಳ ಸಕ್ರಿಯ ಹಾಗೂ ಗಟ್ಟಿಯಾದ ಚಿಂತನ ಕ್ರಮವನ್ನು ರೂಪಿಸುವ ಹಿನ್ನೆಲೆಯಲ್ಲಿ ಕೆಲವು ಮಾರ್ಪಾಟುಗಳನ್ನೊಳಗೊಂಡ ಮಾದರಿ ಪಠ್ಯಪುಸ್ತಕಗಳನ್ನು ಪ್ರಕಟಿಸಿರುವ ಪ್ರಸಾರಂಗವು ವಿದ್ಯಾರ್ಥಿಗಳ ಚಿಂತನಾಕ್ರಮ ಮತ್ತು ಆಲೋಚನಾಕ್ರಮಗಳಿಗೆ ಹೊಸ ನೆಲೆಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿನ 50 ವರ್ಷಗಳ 'E'ಪಠ್ಯ ಕೇಂದ್ರಿತ ನೆಲೆಯ ಚಿಂತನೆಗಳು, ಹೊಸ ಕಾಲದ ಅವಶ್ಯಕತೆಗಳನ್ನು ಅಳವಡಿಸಿಕೊಂಡು ಈ ಕಾಲದ ಬಹುತ್ವ ಮಾದರಿಗೆ ಅನುಗುಣವಾಗಿ, ವರ್ತಮಾನದ ಅನೇಕ ಆಸಕ್ತಿಗಳನ್ನು ಸಮಸ್ಯೆಗಳನ್ನು ಸಾಹಿತ್ಯವು ಕೂಡ, ತೆರೆದ ಕಣ್ಣುಗಳಿಂದ ಕಾಣುತ್ತಿದೆ ಎಂಬ ಚಿಂತನಶೀಲತೆಯನ್ನು ಪ್ರಕಟಣೆ, ಅಧ್ಯಯನ, ಅಧ್ಯಾಪನಗಳೊಂದಿಗೆ ಹೊರಹಾಕುವುದೇ ಪ್ರಸಾರಾಂಗದ ಮುಖ್ಯ ಧ್ಯೇಯವಾಗಿದೆ.

ಈ ನಿಟ್ಟಿನಲ್ಲಿ ತನ್ನ ಕಾರ್ಯಕ್ಷಮತೆಯ ಕ್ಷಿತಿಜವನ್ನು ಇಮ್ಮಡಿಗೊಳಿಸಿದ ಪ್ರಸಾರಾಂಗವು, ಪ್ರಚಾರೋಪನ್ಯಾಸ ಮಾಲಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ಏರ್ಪಡಿಸುತ್ತಿದೆ. ಅದರಂತೆ ವಿಶ್ವವಿದ್ಯಾಲಯದ ಅವಶ್ಯಕ ಮಾಹಿತಿಗಳನ್ನು ಒಂದೆಡೆ ದಾಖಲಿಸುವ ಹಾಗೂ ಪ್ರಮುಖ ವಿಷಯಗಳನ್ನು, ಆಯೋಜಿತ ಕಾರ್ಯಕ್ರಮಗಳ ಮಾಹಿತಿಯನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ ‘ಇ’ ಪತ್ರಿಕೆಯನ್ನು ಹೊರ ತರುವ ಮುಖಾಂತರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೆಮ್ಮೆಯ ಮುಖವಾಣಿಯಾಗುತ್ತಿರುವುದು ಅತೀವ ಸಂತೋಷದ ಸಂಗತಿ. ವಿಶ್ವವಿದ್ಯಾಲಯದ ವಾರ್ಷಿಕ ವರದಿಗಳನ್ನು 2010 ರಿಂದ 2018 ರವರೆಗೆ 7 ವರದಿಗಳನ್ನು ಪ್ರಕಟಿಸಿದೆ. ಪದವಿ ಪಠ್ಯಪುಸ್ತಕಗಳನ್ನಲ್ಲದೇ ಶೈಕ್ಷಣಿಕ ಹಾಗೂ ಸಂಶೋಧನೆಗೆ ಸಂಬಂದಸಿದ ಕೃತಿಗಳನ್ನು ಪ್ರಕಟಣಿಗೊಳಿಸಿ ವಿಶ್ವವಿದ್ಯಾಲಯದ ಶೈಕ್ಷಣಿಕ ಉನ್ನತಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.

ಹೀಗೆ, ತನ್ನ ಗುಣಾತ್ಮಕತೆ ಹಾಗೂ ಕಾರ್ಯಕ್ಷಮತೆಗಳ ಮೂಲಕ ಪ್ರಸಾರಾಂಗವು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಮಾಜದ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ಮುನ್ನಡೆಯುತ್ತಿದೆ.



Top