ರಾಷ್ಟ್ರೀಯ ಸೇವಾ ಯೋಜನೆ ಕೋಶ(NSS)

ಕೋಶದ ನೋಟ:


ಒಂದು ರಾಷ್ಟ್ರ ಮುಂದುವರಿಯಬೇಕಾದರೆ ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬದುಕಿನೊಡನೆ ನೇರ ಸಂಪರ್ಕ ಇಟ್ಟುಕೊಳ್ಳಬೇಕೆಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಮಹಾತ್ಮಾ ಗಾಂಧೀಜಿಯವರ ಜನ್ಮ ಶತಾಬ್ದಿ ವರ್ಷದಲ್ಲಿ ದಿನಾಂಕ: 24/09/1969 ರಂದು ಅಂದಿನ ಕೇಂದ್ರ ಶಿಕ್ಷಣ ಮಂತ್ರಿಗಳಾಗಿದ್ದ ಡಾ. ವಿ. ಕೆ. ಆರ್. ವಿ. ರಾವ್ ಅವರಿಂದ ಉದ್ಘಾಟಿತವಾಯಿತು.
ಕರ್ನಾಟಕದ ಉತ್ತರ ಗಡಿಭಾಗದ ಬೆಳಗಾವಿಯಲ್ಲಿ ನೆಲೆಗೊಂಡಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಸ್ವತಂತ್ರ ವಿಶ್ವವಿದ್ಯಾಲಯವಾಗಿ ಅಸ್ತಿತ್ವ ಕಂಡುಕೊಂಡು ದಶಮಾನೋತ್ಸವ ಆಚರಿಸುತ್ತಿದೆ. ಶೈಕ್ಷಣಿಕವಾಗಿ ಅತ್ಯುತ್ತಮ ವ್ಯವಸ್ಥೆಯನ್ನು ಕಲ್ಪಿಸುವ ಕನಸು ಹಾಗೂ ಆಶೋತ್ತರಗಳೊಂದಿಗೆ ವಿಶ್ವವಿದ್ಯಾಲಯವು ಬೆಳಗಾವಿ, ವಿಜಯಪೂರ ಹಾಗೂ ಬಾಗಲಕೋಟ ಈ ಮೂರು ಜಿಲ್ಲೆಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 389 ಮಹಾವಿದ್ಯಾಲಯಗಳು ಸಂಯೋಜಿತಗೊಂಡದ್ದು 276 ಕಾಲೇಜುಗಳಲ್ಲಿ ಒಟ್ಟು 316 ಎನ್.ಎಸ್.ಎಸ್. ಘಟಕಗಳಿವೆ. ಒಟ್ಟಾರೆಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ 25,000 ಎನ್.ಎಸ್.ಎಸ್. ಸ್ವಯಂಸೇವಕರನ್ನು ಒಳಗೊಂಡಿದೆ. ಶೈಕ್ಷಣಿಕ ವಿಸ್ತರಣೆಯ ಒಂದು ಭಾಗವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಯುವ ಪೀಳಿಗೆಗೆ ಪ್ರೇರಕವಾಗಬಲ್ಲ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶವು ಹೊಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿರುವ ಎನ್.ಎಸ್.ಎಸ್. ಕೋಶಕ್ಕೆ ಸನ್ಮಾನ್ಯ ಕುಲಪತಿಗಳವರ, ಕುಲಸಚಿವರ ಹಾಗೂ ಅಧಿಕಾರಿವರ್ಗದವರ ಸಂಪೂರ್ಣ ಬೆಂಬಲ ದೊರೆಯುತ್ತಿದೆ.

ರಾಷ್ಟ್ರೀಯ ಸೇವಾ ಯೋಜನೆಯ ಲಾಂಛನ :


ರಾಷ್ಟ್ರೀಯ ಸೇವಾ ಯೋಜನೆಯ ಲಾಂಛನ ಒರಿಸ್ಸಾ ರಾಜ್ಯದ ಕೋನಾರ್ಕ್ನ ಸೂರ್ಯ ದೇವಾಲಯದ ಕಲ್ಲು ರಥದ ಎಂಟು ಕಡ್ಡಿಗಳ ಚಕ್ರ. ಈ ಚಕ್ರದ ಒಳಾಂಗಣ ಕೆಂಪು ಬಣ್ಣವನ್ನು, ಚಕ್ರದ ಹೊರಗಿನ ವ್ಯೂಹ ನೀಲಿ ಬಣ್ಣವನ್ನು ಹಾಗೂ ಕಡ್ಡಿಗಳು ಮತ್ತು ಚಕ್ರದ ಒಳಗಿನ ವ್ಯೂಹ ಬಿಳಿ ಬಣ್ಣವನ್ನು ಒಳಗೊಂಡಿದೆ. ಕೆಂಪುಬಣ್ಣ ಜೀವಂತಿಕೆ, ಸ್ಪೂರ್ತಿ ಮತ್ತು ಚೈತನ್ಯ, ನೀಲಿ ಬಣ್ಣ ಹೃದಯ ವೈಶಾಲ್ಯತೆ ಸಮೃದ್ಧಿಗೂ, ಬಿಳಿ ಬಣ್ಣ ಸರಳತೆ, ಪ್ರಾಮಾಣಿಕತೆ ಮತ್ತು ಶುಭ್ರತೆಗೂ ಪ್ರತೀಕವಾಗಿದೆ.


Top